ನಿರ್ವಾಣ -
ಮೋಕ್ಷಸಿದ್ಧಿ. ಭಾರತೀಯ ತತ್ತ್ವಶಾಸ್ತ್ರದ ಷಡ್ದರ್ಶನಗಳಲ್ಲಿ ಚಾರ್ವಾಕವೊಂದರ ಹೊರತು ಮಿಕ್ಕ ಎಲ್ಲವೂ ಇದನ್ನು ಅತ್ಯುನ್ನತ ಧ್ಯೇಯ ಎನ್ನುತ್ತವೆ. ನಿರ್ವಾಣದ ಕಲ್ಪನೆ ಬೌದ್ಧ ದರ್ಶನದಲ್ಲಿ ತುಂಬ ಮಹತ್ತ್ವದ್ದಾಗಿದೆ. ಚಿಂತನೆಯ ಮಿಕ್ಕ ಪಂಥಗಳೂ ಆತ್ಮಾನುಭೂತಿಯ ಅತ್ಯುನ್ನತ ಗುರಿಯನ್ನು ಮೋಕ್ಷ ಎಂಬ ಪದದಿಂದ ನಿರ್ದೇಶಿಸುತ್ತವೆ. ವಾರಾಣಸಿಯಲ್ಲಿ ನೀಡಿದ ತನ್ನ ಮೊದಲನೆಯ ಪ್ರವಚನದಲ್ಲಿ ಬುದ್ಧ ತನ್ನ ಶಿಷ್ಯರಿಗೆ `ಓ ಭಿಕ್ಷುಗಳೆ, ಇದು ಉದಾತ್ತವಾದ ಸತ್ಯ. ಇದು ದುಃಖನಿರೋಧ, ಇದೇ ಯಾತನೆಯ ನಿಲುಗಡೆ. ಇದೇ ಅತ್ಯುನ್ನತ ನಿರ್ವಾಣ ಸ್ಥಿತಿ' ಎಂದು ಹೇಳಿದ.
ನಿರ್ವಾಣ ಪದದ ವಾಚ್ಯಾರ್ಥ ಆರಿಸುವುದು ಅಥವಾ ಇಲ್ಲಗೊಳಿಸುವುದು; ತಣ್ಣಗಾಗಿಸುವಿಕೆ ಅಥವಾ ನಾಶ. ಅಂಥ ಸ್ಥಿತಿಯಲ್ಲಿ ಮನಸ್ಸು ಯಾತನೆಯಿಂದ ಬಿಡುಗಡೆ ಹೊಂದುತ್ತದೆ. ಬೆಂಕಿಯ ಕುಡಿ ಆರುವಂತೆ, ನಿರ್ವಾಣ ಶಬ್ದ ಉಪನಿಷತ್ತುಗಳಲ್ಲಿ ಅನೇಕ ಕಡೆ ಕಂಡುಬರುತ್ತದೆ. ಭಗವದ್ಗೀತೆಯಲ್ಲಿ ಎಲ್ಲ ಕಾಮನೆಗಳನ್ನು ಆರಿಸುವಿಕೆ ಎಂಬಂತೆ ಅದು ಉಕ್ತವಾಗಿದೆ. ವಿಷ್ಣುಪುರಾಣ ಭಗವಂತನಲ್ಲಿ ಸ್ವಾರ್ಥರಹಿತ ಭಕ್ತಿಯನ್ನಿಡುವುದು ನಿರ್ವಾಣದ ಸಾಧನೆಗೆ ಒಂದು ಮಾರ್ಗ ಎಂದು ಹೇಳುತ್ತದೆ. ಸಂಸಾರವೆಂಬ ಚಕ್ರದಿಂದ ಬಿಡುಗಡೆ ಹೊಂದುವುದು ಎಂಬ ಅರ್ಥದಲ್ಲಿ ಜೈನರು ನಿರ್ವಾಣ ಪದವನ್ನು ಉಪಯೋಗಿಸುವರಾದರೂ ನಿರ್ವಾಣಕ್ಕಿಂತ ಮೋಕ್ಷದ ಕಲ್ಪನೆಯ ಬಗ್ಗೆ ಹೆಚ್ಚು ಪ್ರಾಶಸ್ತ್ಯ ನೀಡಿದ್ದಾರೆ.

ಬುದ್ಧನಿಗೆ ತಾತ್ತ್ವಿಕ ಚರ್ಚೆಗಳನ್ನು ನಡೆಸುವುದು ಇಷ್ಟವಾಗುತ್ತಿರಲಿಲ್ಲ. ಅತ್ಯುನ್ನತ ಸತ್ಯ ಅಥವಾ ನಿರ್ವಾಣದ ಸ್ವರೂಪವನ್ನು ಕುರಿತು ಪ್ರಶ್ನೆಗಳನ್ನು ಹಾಕಿದಾಗ ಆತ ಮೌನವಾಗಿರುತ್ತಿದ್ದ. ಅಂಥ ಪ್ರಶ್ನೆಗಳೇ ಸುಸಂಗತವಲ್ಲ ಎಂಬುದು ಅವನ ಇಂಗಿತ. ಏಕೆಂದರೆ ಅವನ ಮುಖ್ಯ ಧ್ಯೇಯ ಜನರನ್ನು ಯಾತನೆಯಿಂದ ಬಿಡುಗಡೆಯತ್ತ ಕೊಂಡೊಯ್ಯುವುದಾಗಿತ್ತು. ಆದರೆ ಈ ಬಗ್ಗೆ ಅವನು ತಳೆದ ಮೌನವನ್ನು ಅನೇಕ ವೇಳೆ ಬೇರೆ ಬೇರೆ ರೀತಿಗಳಲ್ಲಿ ವಾಖ್ಯಾನಿಸಲಾಯಿತು. ನಿರ್ವಾಣದ ಸ್ವರೂಪವನ್ನು ಕುರಿತ ಎರಡು ಮುಖ್ಯವಾದ ವಾಖ್ಯಾನಗಳುಂಟು. 1. ನೇತ್ಯಾತ್ಮಕ ವಿವರಣೆ ಮತ್ತು 2. ಇತ್ಯಾತ್ಮಕ ವಿವರಣೆ. ಬುದ್ಧನ ಶಿಷ್ಯರೇ ಕೆಲವರು ನಿರ್ವಾಣಕ್ಕೆ ನೇತ್ಯಾತ್ಮಕ ವಾಖ್ಯಾನ ನೀಡಿದರು. ನಿರ್ವಾಣ ಎನ್ನುವುದು ಏನೂ ಇರದ ಶೂನ್ಯ ಸ್ಥಿತಿ ಎಂದು ಅವರು ಹೇಳಿದರು. ಅದು ಯಾತನೆಯ ಸಂವೇದನೆ ಹಾಗೂ ಎಲ್ಲ ಬಗೆಯ ಅಸ್ತಿತ್ವದ ನೆಲೆಗಳಿಂದ ಬಿಡುಗಡೆ ಎಂದರು. ಅದು ಸಂಪೂರ್ಣನಾಶ ಸ್ಥಿತಿ. ಮಿಲಿಂದದಲ್ಲಿರುವ ಕೆಲವು ಭಾಗಗಳು ಬುದ್ಧನು ಪರಿನಿರ್ವಾಣದ ಅನಂತರ ಅಸ್ತಿತ್ವದಲ್ಲಿರಲಿಲ್ಲ ಎಂಬುದನ್ನು ತೋರಿಸಿಕೊಡುತ್ತವೆ. ತಥಾನುಗತ ಭೌತಿಕ ತತ್ತ್ವದಿಂದ ಹೀಗೆ ಬಿಡುಗಡೆ ಹೊಂದಿದ ಮೇಲೆ ಮಹಾಸಾಗರದಂತೆ ಆಳವೂ ಅಮೇಯವೂ ಅಗಾಧವೂ ಆಗಿದ್ದಾನೆ? ಕೋಸಲದ ಪೆಸೆನದಿಗೆ ಖೇಮಾ ಭಿಕ್ಷುಣಿ ಸಾವು ತಥಾಗತನನ್ನು ಐದು ಸ್ಕಂಧಗಳ ಭೌತಿಕ ಅಸ್ತಿತ್ವದಿಂದ ಬಿಡುಗಡೆ ಮಾಡುತ್ತದೆ ಎಂದು ಭರವಸೆ ಕೊಡುತ್ತಾಳೆ. ಯಾರಲ್ಲಿ ಪಾಪ ಮುಗಿದಿದೆಯೊ ಆ ಭಿಕ್ಷು ಸತ್ತುಹೋಗುತ್ತಾನೆ ಎಂಬ ನಾಸ್ತಿಕ ಅಭಿಪ್ರಾಯವನ್ನು ತಳೆಯಬಾರದು ಎಂದು ಯಮಕನಿಗೆ ಸಾರೀಪುತ್ರ ಹೇಳುತ್ತಾನೆ. ಈ ಅರ್ಥದಲ್ಲಿ ಮ್ಯಾಕ್ಸ್ ಮುಲ್ಲರ್ ಮತ್ತು ಚೈಲ್ಡರ್ಸ್ ನಿರ್ವಾಣಕ್ಕೆ ಸಂಬಂಧಪಟ್ಟ ಎಲ್ಲ ಭಾಗಗಳನ್ನೂ ಕ್ರಮಬದ್ಧವಾಗಿ ಪರೀಕ್ಷೆ ಮಾಡಿದ ಅನಂತರ ನಿರ್ವಾಣವೆಂದರೆ ನಾಶ ಎಂದು ಅರ್ಥ ಮಾಡಬೇಕಾದಂಥ ಒಂದೇ ಒಂಧು ಭಾಗವೂ ಯಾವ ವಿವರಣೆಯಲ್ಲೂ ಇಲ್ಲ-ಎಂಬ ನಿರ್ಣಯಕ್ಕೆ ಬಂದಿದ್ದಾರೆ. ಆದರೆ ನಾಗಸೇನ ನಿರ್ವಾಣದ ಕಲ್ಪನೆಗೆ ರಂಗು ಹಚ್ಚಿ ಅದು ಎಲ್ಲ ಚಟುವಟಿಕೆಯ ನಾಶ, ಇಲ್ಲದಿಕೆ, ಚಿತ್ರವೃತ್ತಿ ನಿರೋಧ, ಸಕಲವೃತ್ತಿ ನಿರೋಧ, ಸಕಲ ಅಸ್ತಿತ್ವದ ಇಲ್ಲದಿಕೆ, ಭಾವನಿರೋಧ ಎಂದು ಹೇಳುತ್ತಾನೆ.

ಆದರೂ ಕೆಲವು ಪ್ರಾಚೀನ ಬೌದ್ಧರಿಗೆ ನಿರ್ವಾಣ ಅಸ್ತಿತ್ವದ ಪೂರ್ಣತೆ. ಈ ಪ್ರಪಂಚದ ನೋವು ನಲಿವುಗಳಿಂದ ಬಹುವಾಗಿ ಮೇಲಕ್ಕೆ ಏರಿದ ಒಂದು ಅನಂತ ಸೌಂದರ್ಯ. ನಿರ್ವಾಣ ಅಸ್ತಿತ್ವವಲ್ಲ ಅಥವಾ ನಾಶವಲ್ಲ ಅಥವಾ ಅನಂತ ಸತ್ಯದೊಡನೆ ಒಂದಾಗುವಿಕೆಯೂ ಅಲ್ಲ. ಬುದ್ಧ ಇದು ಯಾವುದನ್ನೂ ಸ್ಪಷ್ಟವಾಗಿ ಒಪ್ಪಿಕೊಳ್ಳುವುದಿಲ್ಲ. ನಿರ್ವಾಣ ನಾಶಸ್ಥಿತಿ ಎಂದು ಭಾವಿಸುವುದು ದಾರ್ಶನಿಕರಿಗೆ ಕುಟಿಲ ನಾಸ್ತಿಕ್ಯವಾಗುತ್ತದೆ. ಆದ್ದರಿಂದ ಅವರು ನಿರ್ವಾಣಕ್ಕೆ ಇತ್ಯಾತ್ಮಕ ವಿವರಣೆ ಕೊಡುತ್ತಾರೆ. ಅದು ದಿವ್ಯತ್ವದ ನೆಲೆ. ಅತ್ಯಂತಿಕ ಪರಿಪೂರ್ಣತೆಯ ಸ್ಥಿತಿ. ಅದೇ ಆನಂದ. ನಿರ್ವಾಣಕ್ಕೆ ಕೊಟ್ಟಿರುವ ಈ ಕಲ್ಪನೆ ಮತ್ತು ವಿವರಣೆ ವೈದಿಕ ಸಂಪ್ರದಾಯದಲ್ಲಿರುವ ಮೋಕ್ಷದ ಕಲ್ಪನೆಯ ಸಮೀಪಕ್ಕೆ ಬರುತ್ತದೆ. ಈ ದೃಷ್ಟಿಯನ್ನು ಬೆಂಬಲಿಸುವವರು ಬೌದ್ಧ ಗ್ರಂಥಗಳಿಂದ ಅದನ್ನು ಸಮರ್ಥಿಸುವ ಭಾಗಗಳನ್ನು ಉದ್ಧರಿಸುತ್ತಾರೆ. ಅಲ್ಲಿ ಬುದ್ಧ ನಿರ್ವಾಣವನ್ನು ಕುರಿತು ಬ್ರಹ್ಮದೊಂದಿಗೆ ಐಕ್ಯವಾಗುವುದು ಎಂಬಂತೆ ಹೇಳುತ್ತಾನೆ. ತೆವಿಜ್ಜಸುತ್ತದಲ್ಲಿ ಅದನ್ನು ಬ್ರಹ್ಮದೊಂದಿಗೆ ಐಕ್ಯ ಎಂದು ಕರೆಯಬಹುದು ಎಂದೇ ಹೇಳಿದ್ದಾನೆ. ಈ ವರ್ಣನೆಯ ದೃಷ್ಟಿಯಿಂದ ಬುದ್ಧನನ್ನು ನೇತಿ ಚಿಂತಕ, ಮಾನವ ಹಾಗೂ ಜಗತ್ತುಗಳಲ್ಲಿ ಯಾವುದೇ ಒಂದು ಬಂಧಕ ತತ್ತ್ವವಿದೆಯೆಂದು ಒಪ್ಪದವನು ಎಂದು ಹೇಳುವುದು ತಪ್ಪಾಗುತ್ತದೆ ಎಂದು ರಾಧಾಕೃಷ್ಣನ್ ಹೇಳುತ್ತಾರೆ.

ಶ್ರೀಮತಿ ರೈಸ್ ಡೇವಿಡ್ಸ್ ಮತ್ತು ಇತರರು ಬುದ್ಧ ಉಪನಿಷತ್ತುಗಳ ಸಂಪ್ರದಾಯವನ್ನು ಅನುಸರಿಸಿದ ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಅವನ ನಿರ್ವಾಣ ಕಲ್ಪನೆ ಇತ್ಯಾತ್ಮಕವಾದದ್ದು. ನಿರ್ವಾಣ ಧನ್ಯತೆಯ ನೆಲೆ ಎಂಬುದನ್ನು ತೋರಿಸುವ ಭಾಗಗಳು ಅವನ ಉಪದೇಶಗಳಲ್ಲಿವೆ. ಬ್ರಹ್ಮಪ್ರಾಪ್ತಿ ಎಂಬ ಪದವನ್ನು ಅವನು ಕೆಲವೊಮ್ಮೆ ಬಳಸುತ್ತಾನೆ. ಆದರೆ ನಿರ್ವಾಣವನ್ನು ಇತ್ಯಾತ್ಮಕವಾದ ಒಂದು ಸ್ಥಿತಿ ಎಂದು ಪರಿಗಣಿಸುವುದೇ ಆದ ಪಕ್ಷದಲ್ಲಿ ನಾವು ನಿತ್ಯತೆಯ ಸತ್ಯವನ್ನು ಒಪ್ಪಿಕೊಳ್ಳಬೇಕಾಗುತ್ತದೆ. ನಿತ್ಯತತ್ತ್ವವಾದ ಆತ್ಮವನ್ನು ಬುದ್ಧ ಅಂಗೀಕರಿಸಬೇಕಾಗುತ್ತದೆ. ನಮಗೆ ತಿಳಿದಿರುವಂತೆ ಬುದ್ಧ ಆತ್ಮ ಎಂಬ ಹೆಸರಿನ ಯಾವುದೇ ನಿತ್ಯತತ್ತ್ವವೊಂದನ್ನು ವಿರೋಧಿಸಿದವ. ಅವನು ನಾಶತತ್ತ್ವ ಪ್ರತಿಪಾದಕನಲ್ಲದಿರಬಹುದು. ಆದರೆ ಅವನು ಏಕತತ್ತ್ವವಾದಿಯಲ್ಲ, ನಿತ್ಯತತ್ತ್ವಗಳನ್ನು ನಂಬಿದ ವ್ಯಕ್ತಿಯಲ್ಲ, ಅವನು ಹೇಳಿದ್ದು ಸರ್ವಂ ಪೃಥಕ್ ಸರ್ವಂ ಕ್ಷಣಿಕಂ ಎಂದು.

 ನಿರ್ವಾಣದ ಸ್ವರೂಪ ಅಥವಾ ನಿತ್ಯ ಆತ್ಮದ ಸ್ವರೂಪವನ್ನು ಕುರಿತ ಭೌತಾತೀತ ತತ್ತ್ವಗಳನ್ನು ವಿಸ್ತರಿಸಲು ಬುದ್ಧ ಇಚ್ಛಿಸಲಿಲ್ಲ. ಈಗಾಗಲೇ ಸೂಚಿಸಿರುವ ಹಾಗೆ ಅವನು ತಾತ್ತ್ವಿಕ ಚರ್ಚೆಗಳಿಗೆ ವಿರೋಧಿ. ಈ ಸಮಸ್ಯೆಗಳನ್ನು ಕುರಿತು ಅವನು ಮೌನವಾಗಿದ್ದ. ಕಾರಣವಿಲ್ಲದೆ ತಪ್ಪಾಗಿ ಸುಳ್ಳಾಗಿ ತನ್ನನ್ನು ಕೆಲವರು ಆಕ್ಷೇಪಿಸಿ ಶ್ರಮಣ ಗೋತಮ ನಾಸ್ತಿಕ, ಅವನು ವಸ್ತುವಿನ ನಾಶವನ್ನು ಕ್ಷಯವನ್ನು ಸಾವನ್ನು ಬೋಧಿಸುತ್ತಾನೆ-ಎನ್ನುತ್ತಾರೆ. ನಾನು ಏನಲ್ಲವೊ ಯಾವುದು ನನ್ನ ಸಿದ್ಧಾಂತವಲ್ಲವೊ ಅದನ್ನು ನನ್ನದೆಂದು ಹೇಳುತ್ತಾರೆ. ಎಂಬುದು ಬುದ್ಧನ ಮಾತು.

ಒಮ್ಮೆ ಆಚಾರ್ಯ ಮಾಲಂಕ್ಯ ತಥಾಗತನನ್ನು ಕೇಳಿದ- ವಿರ್ಶವ ಶಾಶ್ವತವಾದದ್ದೆ ಅಶಾಶ್ವತವಾದದ್ದೆ ಎಂದು. ಬುದ್ಧ ನುಡಿದ `ಮಾಲುಕ್ಯಪುತ್ರ, ಪರಿಭಾವಿಸು. ಒಬ್ಬ ವ್ಯಕ್ತಿಗೆ ವಿಷಪೂರಿತವಾದ ಒಂದು ಬಾಣ ನಾಟಿಕೊಂಡಿದೆ. ನೆಂಟರಿಷ್ಟರು ಗೆಳೆಯರು ವೈದ್ಯನನ್ನು ಕರೆತರುತ್ತಾರೆ. ಆಗ ವ್ಯಕ್ತಿ ಬಾಣವನ್ನು ಬಿಟ್ಟವ ಯಾರು, ಅವನು ಉದಾತ್ತ ವ್ಯಕ್ತಿಯೇ ಅಲ್ಲವೆ, ಬ್ರಾಹ್ಮಣನೆ, ವೈಶ್ಯನೆ ಅಥವಾ ಶೂದ್ರನೆ-ಇದನ್ನು ತಿಳಿದುಕೊಳ್ಳುವವರೆಗೂ ನಾನು ಈ ಗಾಯಗಳಿಗೆ ಚಿಕಿತ್ಸೆ ಮಾಡಿಸಿಕೊಳ್ಳುವುದಿಲ್ಲ ಎಂದು ಹೇಳಿದರೆ ಹೇಗಾಗುತ್ತದೊ ಇದು ಹಾಗೆ. ಆದ್ದರಿಂದ ಮಾಲುಕ್ಯಪುತ್ರ, ನಾನು ಏನನ್ನು ಹೇಳಿಲ್ಲವೊ ಅದು ವ್ಯಕ್ತವಾಗದೆಯೆ ಉಳಿದಿರಲಿ. ಯಾವುದು ವ್ಯಕ್ತವಾಗಿದೆಯೊ ಅದು ವ್ಯಕ್ತವಾಗಿಯೆ ಇರಲಿ.

ಕೆಲವು ವೇಳೆ ನಿರ್ವಾಣದ ಎರಡು ರೂಪಗಳ ನಡುವೆ ವ್ಯತ್ಯಾಸವನ್ನು ಕಲ್ಪಿಸಲಾಗುತ್ತದೆ. (1) ಉಪಾಧಿಶೇಷ ನಿರ್ವಾಣ ಎಂಬುದು ಒಂದು. ಇದರಲ್ಲಿ ಮಾನವನ ರಾಗಭಾವಗಳು ಅಳಿಯುತ್ತವೆ. (2) ಇನ್ನೊಂದು ಅನುಪಾಧಿಶೇಷ ನಿರ್ವಾಣ. ಇಡಿಯ ಅಸ್ತಿತ್ವವೇ ಇದರಲ್ಲಿ ಅಳಿದು ಹೋಗುತ್ತದೆ. ಚೈಲ್ಡರ್ಸನ ಪ್ರಕಾರ ಉಪಾಧಿಶೇಷ ನಿರ್ವಾಣ ಪರಿಪೂರ್ಣವಾದ ಸಂತನೊಬ್ಬನ ನಿಲುವನ್ನು ಹೇಳುತ್ತದೆ. ಅದರಲ್ಲಿ ಅಸ್ತಿತ್ವದ ಕಡೆಗೆ ನಮ್ಮನ್ನು ಸೆಳೆಯುವ ಬಯಕೆ ಅಳಿದುಹೋಗಿರುವುದಾದರೂ ಇನ್ನೂ ಐದು ಸ್ಕಂಧಗಳು ಉಳಿದಿರುತ್ತವೆ. ಇದನ್ನೂ ನಿರ್ವಾಣ ಎಂದು ಕರೆಯಲಾಗುವುದು. ಇದು ಜೀವನ್ಮುಕ್ತಿಗೆ ಸಮಾನವಾದದ್ದು. ಅನುಪಾಧಿಶೇಷ ನಿರ್ವಾಣದಲ್ಲಾದರೆ ಸಂತ ಸತ್ತಾಗ ಅಸ್ತಿತ್ವ ಸಮಸ್ತವೂ ಅಳಿಯುತ್ತದೆ. ಈ ಜಗತ್ತಿನಲ್ಲಿ ನಿರ್ವಾಣ ಪಡೆದ ಎಂದು ಹೇಳಿದಾಗ ಅದು ಉಪಾಧಿಶೇಷ ನಿರ್ವಾಣ ಅಥವಾ ಜೀವನ್ಮುಕ್ತಿಗೆ ಸ್ಥಿತಿ. ಅನುಪಾಧಿಶೇಷ ನಿರ್ವಾಣದಲ್ಲಿ ಸಮಸ್ತ ಅಸ್ತಿತ್ವದ ಅಳಿವು, ಅದು ಅರ್ಹಂತಸ್ಥಿತಿ. ಅದೇ ಪರಿನಿರ್ವಾಣ. ಅದು ಅಂತಿಮ ವಿಮೋಚನೆ. ಆದರೆ ತಥಾಗತನ ಅಂತಿಮ ವಿಮುಕ್ತಿಯನ್ನು ಕೆಲವೊಮ್ಮೆ ಮಹಾಪರಿನಿರ್ವಾಣ ಎಂದು ಕರೆಯಲಾಗಿದೆ.

ನಿರ್ವಾಣ ಹೊಂದಿದ ಆತ್ಮ ಪರಮಾತ್ಮನೊಂದಿಗೆ ಐಕ್ಯ ಹೊಂದುವುದೆ, ಪರಮಾತ್ಮನ ಸಮೀಪದಲ್ಲಿ ತಾನೆ ಬೇರೆಯಾಗಿ ಇರುವುದೆ, ಪರಮಾತ್ಮನ ರೂಪನ್ನೆ ಪಡೆಯುವುದೆ ಎಂಬ ವಿಚಾರಗಳಲ್ಲಿ ಒಮ್ಮತವಿಲ್ಲ.
(ಟಿ.ಜಿ.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ